ವರದಿ
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಭಾರಿ ಮಳೆಯ ಅಬ್ಬರ ಮುಂದುವರಿದ ಹಿನ್ನೆಲೆಯಲ್ಲಿ ಬುಧವಾರವೂ ಮಳೆ ಎಚ್ಚರಿಕೆ ಮುಂದುವರಿಸಲಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇರುವುದರಿಂದ 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ನಿರಂತರ ಮಳೆಯಿಂದ ಕಾಸರಗೋಡು ಸೇರಿದಂತೆ ಹಲವೆಡೆ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಕೆಲವು ನದಿಗಳು ಅಪಾಯ ಮಟ್ಟದ ಸಮೀಪ ಅಥವಾ ಅದಕ್ಕಿಂತ ಮೇಲೆಯೇ ಹರಿಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ತಗ್ಗು ಪ್ರದೇಶಗಳಲ್ಲಿ ಜಲಾವೃತ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾಸರಗೋಡು ಜಿಲ್ಲೆಯ ಶಾಲೆಗಳು, ಕಾಲೇಜುಗಳು ಹಾಗೂ ಇತರೆ ಶಿಕ್ಷಣ ಸಂಸ್ಥೆಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ. ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿಯೂ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
ಹವಾಮಾನ ಇಲಾಖೆ ಆಗಸ್ಟ್ 7ರವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದು, ಕೆಲವು ಪ್ರದೇಶಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಸ್ಥಳೀಯ ಆಡಳಿತ ಪ್ರವಾಹ ಮತ್ತು ಭೂಕುಸಿತದ ಅಪಾಯ ಇರುವ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಿದ್ದು, ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಮೀನುಗಾರರು ಸಮುದ್ರಕ್ಕೆ ಇಳಿಯುವ ಮೊದಲು ಹವಾಮಾನ ಎಚ್ಚರಿಕೆಗಳನ್ನು ಗಮನಿಸುವಂತೆ ಸೂಚಿಸಲಾಗಿದ್ದು, ನದಿ ತೀರ, ತಗ್ಗು ಪ್ರದೇಶ ಹಾಗೂ ಭೂಕುಸಿತ ಸಂಭವಿಸುವ ಪ್ರದೇಶಗಳಲ್ಲಿ ವಾಸಿಸುವ ಜನರು ಅನಗತ್ಯವಾಗಿ ಹೊರಗೆ ಸಂಚರಿಸದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಧಿಕೃತ ಹವಾಮಾನ ಇಲಾಖೆ ಹಾಗೂ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ.

