
ತೇರದಾಳ : ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಜವಾಬ್ದಾರಿ ಮತ್ತು ಶಿಸ್ತು ಬೆಳೆಸುವ ಉದ್ದೇಶದಿಂದ ಪ್ರತಿಷ್ಠಿತ ಎಸ್.ಡಿ.ಎಂ ಟ್ರಸ್ಟ್ನ ಡಾ. ಸಿದ್ದಾಂತ ದಾನಿಗೊಂಡ ಸೆಂಟ್ರಲ್ ಶಾಲೆ, ತೇರದಾಳದಲ್ಲಿ ವಿದ್ಯಾರ್ಥಿ ಸಂಸತ್ತಿನ ಶಾಲಾ ಮಂತ್ರಿಮಂಡಲದ ಪದಗ್ರಹಣ ಸಮಾರಂಭ ಅನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬನಹಟ್ಟಿ ಉಪ ವಿಭಾಗದ ಸಿಪಿಐ ಶ್ರೀ ಆರ್. ಆರ್. ಪಾಟೀಲ,ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪುಷ್ಪದಂತ ಎಂ. ದಾನಿಗೊಂಡ, ನಿರ್ದೇಶಕರಾದ ಡಾ. ಮಧುರಾ ಪಿ.ದಾನಿಗೊಂಡ, ಡೀನ್ ಡಾ. ವಿಶ್ವನಾಥ ರೆಡ್ಡಿ, ಶಾಲೆಯ ಪ್ರಾಚಾರ್ಯ ಸಂದೀಪ ಸೋಮಸೋಲೆ ಹಾಗೂ ಉಪಪ್ರಾಚಾರ್ಯೆ ಪೂಜಾ ಗುಪ್ತಾ ಉಪಸ್ಥಿತರಿದ್ದು, ಜ್ಞಾನದ ಸಂಕೇತವಾದ ದೀಪ ಪ್ರಜ್ವಲನೆ ಮಾಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.ಬಳಿಕ ಶಾಲಾ ಮೈದಾನದಲ್ಲಿ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಂದ ಶಿಸ್ತುಬದ್ಧ ಹಾಗೂ ಆಕರ್ಷಕ ಮಾರ್ಚ್ ಪಾಸ್ಟ್ ನಡೆ ಯಿತು. ಹೆಡ್ ಬಾಯ್, ಹೆಡ್ ಗರ್ಲ್, ವಿವಿಧ ಹೌಸ್ ಕ್ಯಾಪ್ಟನ್ಗಳು,ಉಪನಾಯಕರು ಹಾಗೂ ಕ್ರೀಡಾ ನಾಯಕರಿಗೆ ಮುಖ್ಯ ಅತಿಥಿಗಳು ಅಧಿಕೃತ ಬ್ಯಾಡ್ಜ್ ಹಾಗೂ ಸ್ಯಾಶ್ಗಳನ್ನು ತೊಡಿಸಿ ಅಧಿಕಾರ ಹಸ್ತಾಂತರಿಸಿದರು. ನಂತರ ನೂತನ ಮಂತ್ರಿಮಂಡಲದ ಸದಸ್ಯರು ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದನಿರ್ವಹಿಸುವುದಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಶ್ರೀ ಆರ್. ಆರ್. ಪಾಟೀಲ ಅವರು, “ನಾಯಕತ್ವ ಎನ್ನುವುದು ಕೇವಲ ಅಧಿಕಾರವಲ್ಲ; ಅದು ಜವಾಬ್ದಾರಿಯುತ ಸೇವೆಯಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದರಿಂದ ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ.ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪುಷ್ಪದಂತ ಎಂ. ದಾನಿಗೊಂಡ ಅವರು, ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರು ಶಾಲೆಯ ಶಿಸ್ತು, ಘನತೆ ಮತ್ತು ಮೌಲ್ಯಗಳನ್ನು ಎತ್ತಿಹಿಡಿದು ಎಲ್ಲ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಕರೆ ನೀಡಿದರು. ಸಂಸ್ಥೆಯ ನಿರ್ದೇಶಕರಾದ ಡಾ. ಮಧುರಾ ಪಿ. ದಾನಿಗೊಂಡ ಅವರು, ಮಂತ್ರಿಮಂಡಲದ ಸದಸ್ಯರು ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದರ ಜೊತೆಗೆ ಶಾಲೆಯ ಶಿಸ್ತು, ಸ್ವಚ್ಛತೆ ಹಾಗೂ ಉತ್ತಮ ಪರಿಸರ ಕಾಪಾಡುವಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸಿದ್ದು ಹಾವೋಜಿ, ಡಾ. ಆಕಾಶ ವನಮೊರೆ, ಶ್ರೀಧರ ಬೆಳಗಲಿ, ಗಿರೀಶ ಮಠಪತಿ, ಶಾಲೆಯ ಎಲ್ಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಮನೀಷಾ ಕಾಖಂಡಕಿ ಮತ್ತು ಖುಷಿ ಬಿಸ್ತಾನಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು .
ವರದಿ : ಸಾಗರ್ ಅಳಗೊಂಡ

