ತೇರದಾಳ್ / ರಬಕವಿ – ಬನಹಟ್ಟಿ : ಹಿಪ್ಪರಗಿ ಬ್ಯಾರೇಜಿನ ೨೧ ಕ್ರಸ್ಟ್ ಸ್ಟೀಲ್ ಗೇಟ್ಗಳ ಅಳವಡಿಕೆಗೆ ₹೪೨ ಕೋಟಿ ಅನುದಾನ ಮಂಜೂರಾದ ವಿಚಾರ ಇದೀಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ಕಾಮಗಾರಿಯ ಅನುಮೋದನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಕ್ರೆಡಿಟ್ ಪಡೆಯುವ ವಿಚಾರದಲ್ಲಿ ವಾಕ್ಸಮರ ನಡೆಯುತ್ತಿದೆ.
ಕಾಂಗ್ರೆಸ್ ಮುಖಂಡರ ಪ್ರಕಾರ, ಈ ಕಾಮಗಾರಿಗೆ ಅನುಮೋದನೆ ದೊರೆಯುವಲ್ಲಿ ಜಮಖಂಡಿ ಮಾಜಿ ಶಾಸಕ ಆನಂದ ನ್ಯಾಮಗೌಡ ಹಾಗೂ ತೇರದಾಳ ಕ್ಷೇತ್ರದ ಕಾಂಗ್ರೆಸ ಪಕ್ಷದ ಸಿದ್ದು ಕೊಣ್ಣೂರ ಅವರ ನಿರಂತರ ಪ್ರಯತ್ನ ಪ್ರಮುಖ ಪಾತ್ರ ವಹಿಸಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಅದರ ಬೆನ್ನಲ್ಲೇ ಕಾಮಗಾರಿಗೆ ಅನುಮೋದನೆ ದೊರೆತಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಈ ಕುರಿತು ನಾಯಕರು ಮನವಿ ಸಲ್ಲಿಸುತ್ತಿರುವ ಸಂದರ್ಭದ ಛಾಯಾಚಿತ್ರಗಳನ್ನೇ ಸಾಕ್ಷಿಯಾಗಿ ಉಲ್ಲೇಖಿಸಿರುವ ಕಾಂಗ್ರೆಸ್ ಕಾರ್ಯಕರ್ತರು , “ಯಾರೋ ಮಾಡಿದ ಕೆಲಸಕ್ಕೆ ಇನ್ಯಾರೋ ಕ್ರೆಡಿಟ್ ಪಡೆದು ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಬಾರದು. ಕೇವಲ ಫ್ಲೆಕ್ಸ್ಗಳು ಮತ್ತು ಪ್ರಚಾರದ ಮೂಲಕ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಕೆಲಸ ಮಾಡಿದ್ದು ನಮ್ಮ ನಾಯಕರು, ಅನುಮೋದನೆ ನೀಡಿದ್ದು ನಮ್ಮ ಸರ್ಕಾರ ,” ಎಂದು ಪ್ರತಿಪಾದಿಸಿದ್ದಾರೆ.
ಇನ್ನೊಂದೆಡೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರೂ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದು, ಕಾಮಗಾರಿ ಗೆ ತಮ್ಮ ಕೊಡುಗೆಯನ್ನೂ ಪ್ರಸ್ತಾಪಿಸುತ್ತಿದ್ದಾರೆ. ಹೀಗಾಗಿ ಹಿಪ್ಪರಗಿ ಬ್ಯಾರೇಜಿನ ಅಭಿವೃದ್ಧಿ ಕಾಮಗಾರಿಯ ಕ್ರೆಡಿಟ್ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

