ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಆನಂದ ನಿಲಯ’ ಧಾರಾವಾಹಿಯ ಮೂಲಕ ನಟಿ ದಿವ್ಯಾ ಶ್ರೀಧರ್ ಮತ್ತೊಮ್ಮೆ ಕನ್ನಡ ಕಿರುತೆರೆಗೆ ಮರಳಿದ್ದಾರೆ. ಈ ಹಿಂದೆ ‘ಆಕಾಶದೀಪ’ ಧಾರಾವಾಹಿಯಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದಿದ್ದ ಅವರು, ನಂತರ ತಮಿಳು ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು.
ತಮಿಳುನಾಡಿನಲ್ಲಿ ನೆಲೆಸಿದ್ದ ದಿವ್ಯಾ ಶ್ರೀಧರ್ ಇದೀಗ ಕನ್ನಡ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಮತ್ತೆ ಅಭಿನಯಿಸುವ ಅವಕಾಶ ದೊರೆತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ತಮ್ಮ ಕನ್ನಡ ಕಿರುತೆರೆ ಪ್ರವೇಶದ ಹಿಂದಿರುವ ಪ್ರಮುಖ ಕಾರಣವನ್ನು ಹಂಚಿಕೊಂಡಿರುವ ದಿವ್ಯಾ ಶ್ರೀಧರ್, ತಮ್ಮ ತಂದೆಯ ಆಸೆಯನ್ನು ಈಡೇರಿಸುವ ಉದ್ದೇಶದಿಂದ ಕನ್ನಡಕ್ಕೆ ಮರಳಿರುವುದಾಗಿ ತಿಳಿಸಿದ್ದಾರೆ. ತಂದೆಗೆ ಕನ್ನಡದಲ್ಲಿ ತಮ್ಮ ಅಭಿನಯವನ್ನು ನೋಡಬೇಕೆಂಬ ಆಸೆಯಿತ್ತು. ಆ ಆಸೆಯನ್ನು ಈಡೇರಿಸುವ ಅವಕಾಶ ‘ಆನಂದ ನಿಲಯ’ದ ಮೂಲಕ ಸಿಕ್ಕಿರುವುದು ತಮ್ಮ ಪಾಲಿಗೆ ವಿಶೇಷ ಎಂದು ಅವರು ಹೇಳಿದ್ದಾರೆ.
‘ಆಕಾಶದೀಪ’ ಧಾರಾವಾಹಿಯ ನಂತರ ವೈಯಕ್ತಿಕ ಜೀವನದಲ್ಲಿ ಹಲವು ಬದಲಾವಣೆಗಳು ನಡೆದವು. ಬಳಿಕ ಚೆನ್ನೈನಲ್ಲಿ ಪುಟಾಣಿ ಮಗಳೊಂದಿಗೆ ನೆಲೆಸಿದ್ದ ಅವರು, ತಮಿಳು ಕಿರುತೆರೆಯಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಿದರು.
ತಮಿಳು ಕಿರುತೆರೆಯಲ್ಲಿ ಕೆಲಸ ಮಾಡುವ ಅನುಭವವೂ ತಮ್ಮ ವೃತ್ತಿಜೀವನಕ್ಕೆ ಸಾಕಷ್ಟು ಹೊಸ ವಿಷಯಗಳನ್ನು ಕಲಿಸಿದೆ ಎಂದು ದಿವ್ಯಾ ಹೇಳಿದ್ದಾರೆ. ವಿಭಿನ್ನ ಭಾಷೆಯ ಪ್ರೇಕ್ಷಕರು, ಕೆಲಸದ ವಿಧಾನ ಹಾಗೂ ಪಾತ್ರಗಳನ್ನು ನಿರ್ವಹಿಸುವ ಅನುಭವದಿಂದ ನಟಿಯಾಗಿ ಮತ್ತಷ್ಟು ಬೆಳೆಯಲು ಸಾಧ್ಯವಾಯಿತು ಎಂದು ಅವರು ತಿಳಿಸಿದ್ದಾರೆ.
ಇದೀಗ ‘ಆನಂದ ನಿಲಯ’ ಧಾರಾವಾಹಿಯ ಮೂಲಕ ಕನ್ನಡಿಗರ ಮುಂದೆ ಮತ್ತೆ ಕಾಣಿಸಿಕೊಳ್ಳುತ್ತಿರುವ ದಿವ್ಯಾ ಶ್ರೀಧರ್, ಹೊಸ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಕನ್ನಡ ಪ್ರೇಕ್ಷಕರು ತಮ್ಮ ಹೊಸ ಪಾತ್ರವನ್ನು ಕೂಡ ಹಿಂದಿನಂತೆಯೇ ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ತಮ್ಮ ವೃತ್ತಿಜೀವನ, ಕನ್ನಡಕ್ಕೆ ಮರಳಿದ ಕಾರಣ, ತಮಿಳು ಕಿರುತೆರೆಯ ಅನುಭವ ಹಾಗೂ ವೈಯಕ್ತಿಕ ಜೀವನದ ಹಲವು ವಿಚಾರಗಳ ಕುರಿತು ದಿವ್ಯಾ ಶ್ರೀಧರ್ ‘ವಿಜಯ ಕರ್ನಾಟಕ ವೆಬ್’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

