ತೇರದಾಳ: ತೇರದಾಳ ವಿಧಾನಸಭಾ ಕ್ಷೇತ್ರದ ರೈತರಿಗೆ ಸಂತಸದ ಸುದ್ದಿಯೊಂದು ಲಭಿಸಿದೆ. ಕ್ಷೇತ್ರದ ಭಾರತೀಯ ಜನತಾ ಪಕ್ಷದ ಶಾಸಕ ಸಿದ್ದು ಸವದಿ ಅವರ ನಿರಂತರ ಪ್ರಯತ್ನ ಹಾಗೂ ಕರ್ನಾಟಕ ಸರ್ಕಾರದ ಮೇಲೆ ಹೇರಿದ ಒತ್ತಡದ ಫಲವಾಗಿ ಹಿಪ್ಪರಗಿ ಬ್ಯಾರೇಜಿನ ೨೧ ಕ್ರಸ್ಟ್ ಸ್ಟೀಲ್ ಗೇಟ್ಗಳ ಅಳವಡಿಕೆ ಕಾಮಗಾರಿಗೆ ರಾಜ್ಯ ಸರ್ಕಾರದ ₹೪೨ ಕೋಟಿ ಅನುದಾನ ಮಂಜೂರು ಮಾಡಿದ್ದು, ಕಾಮಗಾರಿಗಾಗಿ ಟೆಂಡರ್ ಪ್ರಕ್ರಿಯೆಯನ್ನು ಕೂಡ ಆರಂಭಿಸಲಾಗಿದೆ.
ಈ ಕುರಿತು ಶಾಸಕ ಸಿದ್ದು ಸವದಿ ಅವರು ಸಂತಸ ವ್ಯಕ್ತಪಡಿಸಿದ್ದು, ಹಿಪ್ಪರಗಿ ಬ್ಯಾರೇಜಿನ ಅಭಿವೃದ್ಧಿಗೆ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ. ಹಲವು ವರ್ಷಗಳಿಂದ ರೈತರು ಹಾಗೂ ಸಾರ್ವಜನಿಕರು ಬ್ಯಾರೇಜಿನ ಕ್ರಸ್ಟ್ ಗೇಟ್ಗಳನ್ನು ಅಳವಡಿಸಬೇಕೆಂದು ಆಗ್ರಹಿಸುತ್ತಿದ್ದರು. ಈ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ನಿರಂತರವಾಗಿ ತಂದು, ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿ ಒತ್ತಾಯಿಸಿದ ಪರಿಣಾಮವಾಗಿ ಇದೀಗ ಸರ್ಕಾರದಿಂದ ₹೪೨ ಕೋಟಿ ಅನುದಾನ ಮಂಜೂರಾಗಿದ್ದು, ಟೆಂಡರ್ ಕರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಿಪ್ಪರಗಿ ಬ್ಯಾರೇಜಿನಲ್ಲಿ ೨೧ ಕ್ರಸ್ಟ್ ಸ್ಟೀಲ್ ಗೇಟ್ಗಳನ್ನು ಅಳವಡಿಸುವುದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಾಗಲಿದ್ದು, ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ, ಬೇಸಿಗೆ ಅವಧಿಯಲ್ಲಿ ನೀರಿನ ಲಭ್ಯತೆ ಸುಧಾರಿಸಿ, ರೈತರ ಕೃಷಿ ಹಾಗೂ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಸಹಕಾರಿಯಾಗಲಿದೆ. ಇದರೊಂದಿಗೆ ಸುತ್ತಮುತ್ತಲಿನ ಪ್ರದೇಶಗಳ ಭೂರ್ಭ ಜಲಮಟ್ಟವೂ ಏರಿಕೆಯಾಗುವ ನಿರೀಕ್ಷೆಯಿದೆ.
ಶಾಸಕ ಸಿದ್ದು ಸವದಿ ಅವರು ಮಾತನಾಡಿ, “ನಮ್ಮ ಕ್ಷೇತ್ರದ ರೈತರ ಹಿತಾಸಕ್ತಿಯೇ ನನ್ನ ಮೊದಲ ಆದ್ಯತೆ. ಹಿಪ್ಪರಗಿ ಬ್ಯಾರೇಜಿನ ಕ್ರಸ್ಟ್ ಗೇಟ್ ಅಳವಡಿಕೆ ಕುರಿತು ನಾನು ಸರ್ಕಾರದ ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಒತ್ತಡ ಹೇರಿದ್ದೇನೆ. ಅದರ ಫಲವಾಗಿ ಇಂದು ₹೪೨ ಕೋಟಿ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಕಾಮಗಾರಿಯನ್ನು ಶೀಘ್ರದಲ್ಲಿ ಆರಂಭಿಸಿ, ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು,” ಎಂದು ತಿಳಿಸಿದ್ದಾರೆ.
ಈ ಮಹತ್ವದ ನಿರ್ಧಾರದಿಂದ ತೆರದಾಳ ಹಾಗೂ ಸುತ್ತಮುತ್ತಲಿನ ರೈತರಲ್ಲಿ ಸಂತಸ ಮನೆ ಮಾಡಿದ್ದು, ಬ್ಯಾರೇಜಿನ ಅಭಿವೃದ್ಧಿಯಿಂದ ನೀರಾವರಿ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ರೈತರು ಸರ್ಕಾರ
ಹಾಗೂ ಶಾಸಕ ಸಿದ್ದು ಸವದಿ ಅವರ ಪ್ರಯತ್ನವನ್ನು ಸ್ವಾಗತಿಸಿದ್ದು, ಕಾಮಗಾರಿ ಶೀಘ್ರ ಪೂರ್ಣಗೊಂಡು ರೈತರಿಗೆ ಅನುಕೂಲವಾಗಲಿ ಎಂದು ಆಶಿಸಿದ್ದಾರೆ.

