ಬಾಗಲಕೋಟೆ, ಜುಲೈ ೬: ಬಾಗಲಕೋಟೆ–ಲೋಕಾಪುರ ರೈಲು ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಶೀಘ್ರವೇ ಪ್ಯಾಸೆಂಜರ್ ರೈಲು ಸೇವೆ ಆರಂಭಿಸಬೇಕು ಹಾಗೂ ಕುಡಚಿ ರೈಲು ಮಾರ್ಗ ಕಾಮಗಾರಿಯನ್ನು ವೇಗಗೊಳಿಸಬೇಕು ಎಂದು ರೈಲ್ವೇ ಹೋರಾಟ ಸಮಿತಿಯ ಅಧ್ಯಕ್ಷ ಕುತುಬುದ್ದೀನ ಖಾಜಿ ಅವರು ಒತ್ತಾಯಿಸಿದರು. ಈ
ಸಂಬಂಧ ಇಂದು ಬಾಗಲಕೋಟೆ ನಗರದ ಸಂಸದರ ಕಚೇರಿಯಲ್ಲಿ ಸಂಸದರಾದ ಪಿ.ಸಿ. ಗದ್ದಿಗೌಡ ಅವರನ್ನು ಭೇಟಿ ಮಾಡಿ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುತುಬುದ್ದೀನ ಖಾಜಿ ಅವರು, ಲೋಕಾಪುರದವರೆಗೆ ನಿರ್ಮಾಣಗೊಂಡಿರುವ ರೈಲು ಮಾರ್ಗದಲ್ಲಿ ಹೊಸ ರೈಲು ನಿಲ್ದಾಣಗಳ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ರ ನೂರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ. ಆದರೆ, ಇದುವರೆಗೂ ಪ್ಯಾಸೆಂಜರ್ ರೈಲು ಸೇವೆ ಆರಂಭವಾಗದಿರುವುದರಿಂದ ಈ ನಿಲ್ದಾಣಗಳು ಬಳಕೆಯಾಗದೆ ಹಾಳಾಗುತ್ತಿದ್ದು, ಕೆಲವು ಕಡೆ ಅನೈತಿಕ ಚಟುವಟಿಕೆಗಳಿಗೆ ಆಸ್ಪದವಾಗುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣಗೊಂಡಿರುವ ಮೂಲಸೌರ್ಯವನ್ನು ಬಳಕೆಗೆ ತರದೇ ನಿರ್ಲಕ್ಷ್ಯ ವಹಿಸಿರುವುದು ಜನಪ್ರತಿನಿಧಿಗಳು ಹಾಗೂ ರೈಲ್ವೇ ಇಲಾಖೆಯ ವೈಫಲ್ಯವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಾಪುರ ಮರ್ಗದಲ್ಲಿ ಈಗಾಗಲೇ ಸಂಚರಿಸುತ್ತಿರುವ ಬಾಗಲಕೋಟೆ–ಮೈಸೂರು ಬಸವ ಎಕ್ಸ್ಪ್ರೆಸ್ (೧೭೩೦೭/೧೭೩೦೮), ಬೆಂಗಳೂರು–ಹೊಸಪೇಟೆ ಪ್ಯಾಸೆಂಜರ್ (೫೬೪೧೯/೫೬೪೨೦) ಹಾಗೂ ವಿಜಯಪುರ–ಹೈದರಾಬಾದ್ ಎಕ್ಸ್ಪ್ರೆಸ್ (೧೭೦೨೯/೧೭೦೩೦) ರೈಲುಗಳ ಸಂಚಾರವನ್ನು ಲೋಕಾಪುರದವರೆಗೆ ವಿಸ್ತರಿಸಲು ಯಾವುದೇ ತಾಂತ್ರಿಕ ತೊಂದರೆ ಇಲ್ಲ. ನೈರುತ್ಯ ರೈಲ್ವೇ, ಹುಬ್ಬಳ್ಳಿ ವಿಭಾಗದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಈ ಮೂರು ರೈಲುಗಳನ್ನು ಲೋಕಾಪುರದವರೆಗೆ ವಿಸ್ತರಿಸುವ ಮೂಲಕ ಸಾವಿರಾರು ಜನರಿಗೆ ಅನುಕೂಲ ಕಲ್ಪಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಬಾಗಲಕೋಟೆ, ಲೋಕಾಪುರ, ಯಾದವಾಡ, ಮುಧೋಳ ಹಾಗೂ ಜಮಖಂಡಿ ಭಾಗದ ಜನರು ಹಲವು ವರ್ಷಗಳಿಂದ ರೈಲ್ವೇ ಸಂರ್ಕಕ್ಕಾಗಿ ನಿರೀಕ್ಷಿಸುತ್ತಿದ್ದು, ಪ್ಯಾಸೆಂಜರ್ ರೈಲು ಸೇವೆ ಆರಂಭವಾದರೆ ವಿದ್ಯರ್ಥಿಗಳು, ರೈತರು, ವ್ಯಾಪಾರಸ್ಥರು, ರ್ಕಾರಿ ನೌಕರರು ಹಾಗೂ ಸಾಮಾನ್ಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಭಾಗದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೂ ಹೊಸ ದಿಕ್ಕು ದೊರೆಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕುಡಚಿ–ಜಮಖಂಡಿ–ಲೋಕಾಪುರ ರೈಲು ಮರ್ಗ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಯಾವುದೇ ಕಾರಣಕ್ಕೂ ವಿಳಂಬವಾಗದಂತೆ ರಾಜ್ಯ ಹಾಗೂ ಕೇಂದ್ರ ರ್ಕಾರಗಳು ಸಮನ್ವಯ ಸಾಧಿಸಿ ಉಳಿದಿರುವ ಅಡೆತಡೆಗಳನ್ನು ತ್ವರಿತವಾಗಿ ನಿವಾರಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಸಂಸದರಾಗಿರುವ ನೀವು ನಿರ್ಣಾಯಕ ಪಾತ್ರ ವಹಿಸಬೇಕೆಂದು ಅವರು ಮನವಿ ಮಾಡಿದರು.
ಇತ್ತೀಚೆಗೆ ರೈಲ್ವೇ ಹೋರಾಟ ಸಮಿತಿಯು ಬೆಳಗಾವಿ ಜಿಲ್ಲಾ ಆಡಳಿತ ಹಾಗೂ ಚಿಕ್ಕೋಡಿ ಭೂಸ್ವಾಧೀನ ಅಧಿಕಾರಿಗಳನ್ನು ಭೇಟಿ ಮಾಡಿ ಜಮಖಂಡಿಯಿಂದ ಕುಡಚಿವರೆಗೆ ಅಗತ್ಯವಿರುವ ಭೂಮಿಯನ್ನು ಶೀಘ್ರದಲ್ಲಿ ರೈಲ್ವೇ ಇಲಾಖೆಗೆ ಹಸ್ತಾಂತರಿಸುವಂತೆ ಮನವಿ ಮಾಡಿದೆ. ಈ ಕುರಿತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಸಂಪರ್ಕಿಸಿದ್ದು , ಅವರು ಯೋಜನೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹಾಗೂ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಕುತುಬುದ್ದೀನ ಖಾಜಿ ತಿಳಿಸಿದರು.
ಅಲ್ಲದೆ, ಬಾಗಲಕೋಟೆ ಜಿಲ್ಲೆಯ ಬಹುದಿನಗಳ ಮಹತ್ವಾಕಾಂಕ್ಷಿ ಯೋಜನೆಯಾದ ಕುಡಚಿ ರೈಲು ಮಾರ್ಗವನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಿ, ಜಿಲ್ಲೆಯ ಜನರ ಬಹುಕಾಲದ ಕನಸನ್ನು ನನಸು ಮಾಡಬೇಕೆಂದು ಅವರು ಒತ್ತಾಯಿಸಿದರು. ಸರ್ಕಾರ ಮತ್ತು ರೈಲ್ವೇ ಇಲಾಖೆ ಈ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸಂಸದರ ತಕ್ಷಣದ ಸ್ಪಂದನೆ
ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಸಂಸದ ಪಿ.ಸಿ. ಗದ್ದಿಗೌಡ ಅವರು ತಕ್ಷಣವೇ ನೈರುತ್ಯ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಲೋಕಾಪುರದವರೆಗೆ ಪ್ಯಾಸೆಂಜರ್ ರೈಲು ಸೇವೆಯನ್ನು ಶೀಘ್ರ ಆರಂಭಿಸುವಂತೆ ಸೂಚಿಸಿದರು. ಜೊತೆಗೆ ಕುಡಚಿ ರೈಲು ಮಾರ್ಗ ಕಾಮಗಾರಿಯನ್ನು ವೇಗಗೊಳಿಸಿ, ಉಳಿದ ಕಾಮಗಾರಿಗಳನ್ನು ಏಕಕಾಲದಲ್ಲಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
“ಈ ವಿಷಯದಲ್ಲಿ ಜಿಲ್ಲೆಯ ಜನರಿಂದ ನನಗೆ ನಿರಂತರ ಒತ್ತಡ ಬರುತ್ತಿದೆ. ಲೋಕಾಪುರ ಪ್ಯಾಸೆಂಜರ್ ರೈಲು ಸೇವೆ ಹಾಗೂ ಕುಡಚಿ ರೈಲು ಮಾರ್ಗ ಕಾಮಗಾರಿಯಲ್ಲಿ ವಿಳಂಬವಾದರೆ ಜಿಲ್ಲೆಯ ಜನರು ಹೋರಾಟಕ್ಕೆ ಮುಂದಾಗುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ವಿಳಂಬ ಮಾಡದೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು” ಎಂದು ಸಂಸದರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ರೈಲ್ವೇ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಜೈಶ್ರೀ ಗುಳಬಾಳ, ಮಹೇಶ ಹುಗ್ಗಿ, ಡಾ. ರವಿ ಜಮಖಂಡಿ, ಬ್ರಿಜ್ ಮೋಹನ ಢಾಗಾ, ದಯಾನಂದ ಬಿಜ್ಜರಗಿ, ಮೈನುದ್ದೀನ ಖಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

