ಜು. 6: ರಬಕವಿ-ಬನಹಟ್ಟಿ ನಗರಸಭೆ ಎದುರು ಸಾರ್ವಜನಿಕ ಕಾಮಗಾರಿ ಇಲಾಖೆ (PWD) ವತಿಯಿಂದ ಸುಮಾರು ₹2 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ ಅನುಸರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕೆ.ಆರ್.ಎಸ್ ಪಕ್ಷದ ಮುಖಂಡರು ಸಂಬಂಧಪಟ್ಟ ಜಮಖಂಡಿ ವಿಭಾಗದ ಇಂಜಿನಿಯರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕಾಮಗಾರಿಯ ಗುಣಮಟ್ಟ, ತಾಂತ್ರಿಕ ಮಾನದಂಡಗಳು ಹಾಗೂ ಮೇಲ್ವಿಚಾರಣೆ ಕುರಿತು ನೇರವಾಗಿ ಪ್ರಶ್ನಿಸಿದರು. ಕಳಪೆ ಕಾಮಗಾರಿಯಿಂದ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತಿದೆ ಎಂದು ಆರೋಪಿಸಿದ ಕೆ.ಆರ್.ಎಸ್ ಪಕ್ಷ, ಕಾಮಗಾರಿಯ ಗುಣಮಟ್ಟದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥ ಗುತ್ತಿಗೆದಾರರು ಹಾಗೂ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಸಾರ್ವಜನಿಕರ ಹಣದಿಂದ ನಡೆಯುವ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಳಪೆ ಕಾಮಗಾರಿಯಿಂದ ಜನರ ಹಣ ಪೋಲಾಗಬಾರದು ಎಂದು ಪಕ್ಷದ ಮುಖಂಡರು ಒತ್ತಾಯಿಸಿದ್ದಾರೆ.

